ಅರಬರ ನಾಡಿನಲಿ ಕನ್ನಡ ರಾಜ್ಯೋತ್ಸವ

ಅರಬರ ನಾಡಿನಲಿ ಕನ್ನಡ ರಾಜ್ಯೋತ್ಸವ

ಹೆಮ್ಮೆಯ ದುಬೈ ಕನ್ನಡಿಗರ ಕನ್ನಡ ರಾಜ್ಯೋತ್ಸವ
ಅರಬರ ನಾಡಲಿ ಕನ್ನಡ ಮಾತೆಗೆ ನಿತ್ಯೋತ್ಸವ.
ಅನಿವಾಸಿ ಕನ್ನಡಿಗರು ಆಚರಿಸುವರು ಕನ್ನಡಮ್ಮನ ಉತ್ಸವವಿಲ್ಲಿ ವರುಷ ವರುಷ
ಬಡಿದ್ದೆಬ್ಬಿಸಿದೆ ಪ್ರತಿಯೊಬ್ಬ ಕನ್ನಡಿಗನೆದೆಯಲಿ ಅಭಿಮಾನದ ಹರುಷ.

ಕನ್ನಡವೇ ಕುಲ, ಕನ್ನಡವೇ ಧರ್ಮವೆಂಬ ಒಗ್ಗಟ್ಟಿನ ಬಲ,
ಪರ ನಾಡಿನಲಿ ಒಟ್ಟಾಗಿ ದುಡಿದು ಸಾಧಿಸುವ ಛಲ.
ಇಸ್ಲಾಂ ನಾಡಾದರೂ, ಸಾರಿದೆ ಸರ್ವ ಧರ್ಮ ಸಮನ್ವಯ (ಟೊಲೆರಾನ್ಸ್ ಇಯರ್ )
ಮಂದಿರ, ಗುರು ದ್ವಾರ, ಚರ್ಚುಗಳಿಗೆ ನೀಡಿವೆ ಸಮಾನ ಸ್ಥಾನ-ಮಾನ.

ಕನ್ನಡ ಪಾಠಶಾಲೆ ನೀಡಿದೆ ಸಾಕ್ಷರತೆಗೊಂದು ಸಾಕಾರ
ಕಲಿಯಲಿಲ್ಲವಾದರೇನು ನೀನು ಅರೇಬಿಕ್ ಭಾಷೆಯ ಒಂದಕ್ಷರ.
ಅರಬ್ಬೀ ನಾಡಲಿ ಕನ್ನಡದ ಕಂದ ಕನ್ನಡವ ನೀ ಕಲಿ-ನಲಿ.
ಕಲಿಯದಿದ್ದರೇನು ನೀನವರ ಭಾಷೆ ಕಳೆದರೂ ದಶಕವ, ಅವರಿಗದು ಕಲ್ಲಿ-ವಲ್ಲಿ.

ಹೋಟೆಲು, ಉದ್ಯಮ, ಬ್ಯಾಂಕು, ಕಛೇರಿ, ಕಟ್ಟಡದ ನಿರ್ಮಾಣದ ಕಾರ್ಯಭಾರ
ಎಲ್ಲದರಲ್ಲೂ ಕನ್ನಡಿಗನೆನಿಸಿಕೊಂಡಿದ್ದಾನೆ ಚತುರ, ಯಶಸ್ಸಿನ ಪಾಲುದಾರ.
ದುಬಾಯಿಯ ಸುಸಜ್ಜಿತ ರೋಡಿನ ತುಂಬೆಲ್ಲಾಅದ್ದೂರಿ ಕಾರುಗಳ ಕಾರುಬಾರು ,
ದುಬಾರಿ ಕಾರುಗಳ ಸರದಾರನಾಗಿರುವನು, ಇಲ್ಲದೇ ಯಾವುದೇ ತಕರಾರು.

ಮರೆಯಿಸಿತ್ತು ಕನ್ನಡಿಗನಿಗೆ ತಾಯ್ನಾಡಿನ
ವಿಧಾನ ಸೌಧ, ಗೊಳಗೊಮ್ಮಟ, ಮೈಸೂರು ಪ್ಯಾಲೇಸು,
ನೋಡು ನೋಡುತ ಎಲ್ಲೆಡೆ ತಲೆ ಎತ್ತಿ ನಿಂತ ಗಗನ ಚುಂಬಿತ ಕಟ್ಟಡಗಳು,
ವಿಶ್ವ ವಿಖ್ಯಾತ ಬುರ್ಜ್ ಖಲೀಫಾ, ಶೇಖ್ ಝಆಯೆದ್ ಮಾಸ್ಕು, ಎಮಿರೇಟ್ಸ್ ಪ್ಯಾಲೇಸು.

ನೆನಪಿಸಿತ್ತು ನಮಗೆ ಬಯಲು ಸೀಮೆಯ ಹಸಿರು ಹೊಲ, ಸಹ್ಯಾದ್ರಿಯ ಬೆಟ್ಟ-ಸಾಲುಗಳ
ಕಂಡಾಗೆಲ್ಲಾ ಸಾಲು-ಸಾಲು ಖರ್ಜೂರದ ಮರ, ಫುಜೈರಾದ ಬೆಟ್ಟ – ಸಾಲುಗಳ.
ಸುಂದರ ಕ್ರ್ಯುಜ್ ಗಳಿಂದ ಹರಿದಾಡುವ ಕ್ರೀಕ್, ಬಿಂಬಿಸಿತ್ತು ನಮ್ಮ ಕಾವೇರಿಯ ಹರಿದಾಟವ
ವಿಹಂಗಮ ಕಾರ್ನಿಶ್ ಕಿನಾರವು , ನೆನಪಿನಲೆಯ ತಂದಪ್ಪಳಿಸಿತ್ತು ಕರಾವಳಿಯ ಕಡಲ ತೀರವ .

ನೋಡುವಾಗ ಅಚ್ಚರಿಯ ಹೂದೋಟ ಮಿರಾಕಲ್ ಗಾರ್ಡನ್,
ಹೊಳೆಯಿಸಿತ್ತು ಕಣ್ಣಂಚಿನಲಿ ಮೈಸೂರಿನ ಬೃಂದಾವನ ಗಾರ್ಡೆನ್.
ಕಣ್ಮನ ಸವಿದಾಗ ದುಬೈ ಮಾಲ್ ನ ವಿಶ್ವ ವಿಖ್ಯಾತ ಮ್ಯೂಸಿಕ್ ಫೌಂಟನ್
ಮರುಕಳಿಸಿತು ಬಾಲ್ಯದಲ್ಲಿ ನೋಡಿದ ಬಣ್ಣ ಬಣ್ಣದ ಮ್ಯೂಸಿಕ್ ಫೌಂಟನ್.

ನಮ್ಮೂರಿನ ಬಗೆ ಬಗೆಯ ಭಕ್ಶ್ಯ-ಭೋಜನ, ಮನ ತಣಿಸಲು ಇಲ್ಲೂ ಲಭ್ಯ.
ಮುದ್ದೆ-ಅನ್ನ-ಸಾಂಬಾರು, ಒಬ್ಬಟ್ಟು, ಮಸಾಲೆ ದೋಸೆ ,ಜೋಳದ ರೊಟ್ಟಿ -ಪಲ್ಯ
ಜೊತೆಗೆ ಒಮ್ಮೆ ಸವಿದು ನೋಡಿ ರುಚಿಕರ ಎಮರಾತಿಯ ಖಾದ್ಯ
ಕುಬುಸು-ಹಮ್ಮುಸು, ಫಲಾಫೇಲ್, ರುಚಿಕರ ಲಾಬಾನು, ಝಅತರು ಎಂಬ ವೈವಿಧ್ಯ

ಕಣ್ಣೆತ್ತ ಸಾಗಿದರೂ ಊರ ತುಂಬೆಲ್ಲಾ ಬರೀ ಮರಳು – ಮರಳು
ಕನ್ನಡಿಗನಾಗಿದ್ದಾನೆ ಇಲ್ಲಿ ತಾ ಮರಳು, ತನ್ನವರೆಲ್ಲವ ಮರೆತು.
ಕಾಯುತಿಹಳು ಕನ್ನಡಾಂಬೆ ಕಂದನಿಗಾಗಿ ಹಿಡಿದು ಧ್ವಜವ ಕೈಯೊಳು.
ದಾರಿ ಕಾಯುತಿಹರು ನಿನ್ನವರು, ಕನ್ನಡಿಗ ನೀ ಬೇಗ ನಿನ್ನ ಗೂಡಿಗೆ ಮರಳು.

ಚೇತನಾ

Comment here

This site uses Akismet to reduce spam. Learn how your comment data is processed.

Next Post

ದುಬೈ... ಧರೆಯು ಹಡೆದ ಸುಂದರ ಮಾಯಾ ನಗರಿ ನೀ.

Wed Dec 2 , 2020
ದುಬೈ… ಧರೆಯು ಹಡೆದ ಸುಂದರ ಮಾಯಾ ನಗರಿ ನೀ. ಸುರಭಿಯ ಬೆಲೆಯಂತೆ ಕಡಲಿನ ಅಲೆಯಂತೆ ದುಪ್ಪಟ್ಟು ನೀ.. ಜಗಮಗಿಸುವ ಬೆಳಕು ಚೆಲ್ಲುವ ಮಾಯಾಂಗನೆ ನೀ. ಬಾನ ಮುಟ್ಟಲು ಭೂರ್ಜಾ ಖಲೀಫವೆಂಬ ಬಾನೆತ್ತರದ ಏಣಿಯ ಕೊಟ್ಟವಳು ನೀ. ಹಲವು ಜಾತಿ ಹಲವು ಧರ್ಮಗಳ ಮಕ್ಕಳ ಪಾಲಿಗೆ ತೊಟ್ಟಿಲಾದವಳು ನೀ. ಕೂಡಿ ಬಾಳಲು ಬಾಳ ಕಟ್ಟಲು ಬೆಂಬಲದ ಬೆಟ್ಟ ನೀ. ಸಾವಿರ ಬಗೆಯ ಸ್ವಚ್ಛಂದ ಸುಚಿಯ ತಿನಿಸು ಕೊಟ್ಟವಳು ನೀ. ಕಣ್ಣ ಕನ್ನಡಿಯಲಿ […]