ಸೌದಿ ಕುವೈತ್ ಕನ್ನಡಿಗರ ಸಹಾಯಕ್ಕೆ ದುಬೈ ಕನ್ನಡಿಗರಿಂದ ಟ್ವಿಟ್ಟರ್ ಅಭಿಯಾನ

 

ಸೌದಿ ಕುವೈತ್ ಕನ್ನಡಿಗರ ಸಹಾಯಕ್ಕೆ ದುಬೈ ಕನ್ನಡಿಗರಿಂದ ಟ್ವಿಟ್ಟರ್ ಅಭಿಯಾನ

ಅಬುಧಾಬಿ : 10.02.2021

ಸೌದಿ ಅರೇಬಿಯಾ ಮತ್ತು ಕುವೈತ್  ಅನಿವಾಸಿ ಕನ್ನಡಿಗರು ದುಬೈನಲ್ಲಿ  ತುರ್ತು ಪರಿಸ್ಥಿತಿಯಲ್ಲಿದ್ದು ಅವರ ಸಹಾಯಕ್ಕೆ ಕರ್ನಾಟಕ  ಸರ್ಕಾರ ಮುಂದೆ ಬರಬೇಕು  & ದುಬೈನಲ್ಲಿ ಕನ್ನಡ ಭವನ ನಿರ್ಮಾಣ ಕೋರಿ ನಾಳೆ ದುಬೈ ಹೆಮ್ಮೆಯ ಕನ್ನಡಿಗರು,ಯುಎಇ ಇದರ ವತಿಯಿಂದ ನಾಳೆ 11.02.2021ರಂದು ಭಾರತೀಯ ಕಾಲಮಾನ  ಸಂಜೆ 5ಕ್ಕೆ ಟ್ವಿಟ್ಟರ್ ಅಭಿಯಾನ ನಡೆಯಲಿದೆ.

ತಮಗೆ ತಿಳಿದಂತೆ ಕೊರೊನ ಮಹಾಮಾರಿ ಎಲ್ಲರ ಜೀವನವನ್ನು ತಲ್ಲಣಗೊಳಿಸಿ ಇಂದಿಗೂ ತನ್ನ ರೌದ್ರಾವತಾರ ಮೆರೆಯುತ್ತಲೇ ಇದೆ. ನಮ್ಮ ಹೆಮ್ಮೆಯ ಯುಎಇ ಕನ್ನಡಿಗರು ತಂಡ ಕೋವಿಡ್ ಸಮಯದಲ್ಲಿ ಇಲ್ಲಿನ ಕನ್ನಡಿಗರಿಗೆ ಸುಮಾರು 8೫,000 ದಿರ್ಹಾಂ (17 ಲಕ್ಷ ರೂಪಾಯಿಯ) ದೇಣಿಗೆಯಿಂದ ಆಹಾರ, ಔಷಧಿ, ವಿಮಾನ ಟಿಕೆಟ್ , ಕೆಲಸ ಕಳುದುಕೊಂಡ ಕನ್ನಡ ಕುಟುಂಬಗಳಿಗೆ ಹಣ ಸಹಾಯ ಕಾರ್ಯಕ್ರಮವನ್ನು ನಡೆಸಿದೆವು. ಅಲ್ಲದೆ ದುಬೈ ಪೋಲೀಸಿನೊಂದಿಗೆ ಸಹಕರಿಸಿ ಕೋವಿಡ್ ಪೀಡಿತ ಕನ್ನಡಿಗರನ್ನು ಆಸ್ಪತ್ರೆಗೆ ಸೇರಿಸಲು ಮತ್ತು ಚಿಕಿತ್ಸೆ ಕೊಡಿಸಲು ನೆರವಾದೆವು. ಇಲ್ಲಿನ ನಮ್ಮ ತಂಡಕ್ಕೆ ದುಬೈ ಸರ್ಕಾರ ಮತ್ತು ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತದೆ.

 ಮಾನ್ಯರೆ, ತಮಗೆ ತಿಳಿದಂತೆ ಈ ಮಹಾಮಾರಿಯನ್ನು ಹತೋಟಿಗೆ ತರಲು ಕೊಲ್ಲಿ ರಾಷ್ಟ್ರಗಳು ಹರಸಾಹಸ ಮಾಡುತ್ತಲೇ ಕಠಿಣ ಮತ್ತು ಅನಿವಾರ್ಯ ಅನಿರೀಕ್ಷಿತ ಕ್ರಮಗಳನ್ನು ಕೈಗೊಳ್ಳುತ್ತಿವೆ . ಇದೇ ನಿಟ್ಟಿನಲ್ಲಿ ಕೊಲ್ಲಿ ರಾಷ್ಟ್ರವಾದ ಸೌದಿ ಅರೇಬಿಯಾ ಮತ್ತು ಕುವೈಟ್ ದೇಶಗಳು ಕೋವಿಡ್ ಮಹಾಮಾರಿಯ ಎರಡನೇ ಅಲೆಯನ್ನು ತಡೆಯಲು ತಕ್ಷಣವೇ ಹಲವು  ದೇಶಗಳಿಂದ ವಿದೇಶಿಯರು ಪ್ರವೇಶ ಮಾಡುವುದನ್ನು ನಿಷೇದಿಸಿದ್ದಾರೆ.ಅದರಲ್ಲಿ ಭಾರತ ದೇಶವೂ ಸಹ ಒಂದು ಎಂದು ತಮ್ಮ ಗಮನಕ್ಕೆ ತಿಳಿದಿದೆ ಎಂದು ಭಾವಿಸುತ್ತೇವೆ.

ಉದ್ಯೋಗದಿಂದ ತಮ್ಮ ಹಾಗು ತಮ್ಮ ಸಂಸಾರದ ಹೊಟ್ಟೆಪಾಡನ್ನು ಸಾಗಿಸಲು ನೂರಾರು ಕಾರ್ಮಿಕರು ಕನಸು ಹೊತ್ತು ಕೊಲ್ಲಿ ರಾಷ್ಟ್ರಕ್ಕೆ ಬರುತ್ತಾರೆ. ತಮಗೆ ಸಂಬಳ ಸಿಕ್ಕಿದ ದಿನ ಎಕ್ಸ್ಚೇಂಜ್ ಸಾಲಿನಲ್ಲಿ ನಿಂತು ಈ ಹಣಕ್ಕಾಗಿ ಕಾಯುತ್ತಿರುವ ತಮ್ಮ ಸಂಸಾರಗಳಿಗೆ ಹಣ ಕಳುಹಿಸುತ್ತಾರೆ. 50 ಡಿಗ್ರಿ ತಾಪಮಾನದಲ್ಲೂ ಎಲ್ಲ ನೋವನ್ನೂ ನುಂಗಿಕೊಂಡು, ಎಲ್ಲ ಕಷ್ಟವನ್ನು ಸಹಿಸಿಕೊಂಡು ದುಡಿಯುತ್ತಾರೆ.

 ಸೌದಿ ಅರೇಬಿಯಾ ಮತ್ತು ಕುವೈತ್ ದೇಶಕ್ಕೆ ನೇರವಾಗಿ ಪ್ರವೇಶ ಮಾಡಲಾಗದೆ ಕೆಲಸ ಅರಸಿ ಬಂದ ಕನ್ನಡಿಗರು ಕರ್ನಾಟಕದಿಂದ ದುಬೈ ನಗರಕ್ಕೆ ಬಂದು 16 ದಿನಗಳ ಕ್ವಾರಂಟೈನ್ ಮುಗಿಸಿ ಈ ಎರಡು ದೇಶಗಳ ಅನುಮತಿ ಸಿಕ್ಕಿ ಅಲ್ಲಿಗೆ ತೆರಳುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆ. ಕೊರೊನದ ಎರಡನೇ ಅಲೆ ಆರಂಭವಾಗಿದ್ದರಿಂದ ಸೌದಿ ಅರೇಬಿಯಾ ಮತ್ತು ಕುವೈತ್ ಎರಡೂ ದೇಶಗಳೂ ದುಬೈನಿಂದ ಸಹ ಎಲ್ಲಾ ಮಾರ್ಗಗಳು – ವಿಮಾನ, ರಸ್ತೆ, ಮುಚ್ಚಿ ಯಾವ ಉದ್ಯೋಗಸ್ಥರೂ ಪ್ರವೇಶ ಮಾಡದಂತೆ ನಿರ್ಬಂಧ ಹೇರಿದೆ. ಈ ಕ್ರಮದಿಂದ ಈ ಮೇಲಿನ ಮಾರ್ಗದಿಂದ ಬಂದ ಕನ್ನಡಿಗರಿಗೆ ಬರಸಿಡಿಲು ಬಡಿದಂತಾಗಿದೆ. ದಿಕ್ಕೇ ತೋಚದೆ ಬಹಳ ಹತಾಶರಾಗಿದ್ದಾರೆ.

 ಈಗಾಗಲೇ ಏಜೆಂಟ್ಗಳಿಗೆ ದುಡ್ಡು ಕೊಟ್ಟು ವೀಸಾ ತೆಗೆದುಕೊಂಡು ಉದ್ಯೋಗದ ನಿರೀಕ್ಷೆಯಲ್ಲಿ ಬಂದಿಳಿದ ಈ ಬಡವರು ಅಲ್ಲೂ ಇಲ್ಲ ಇಲ್ಲೂ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದಾರೆ. ಏಕೆಂದರೆ ಈ ದೇಶದ ಕ್ರಮಗಳನ್ನು ಮನವರಿತ ದುಬೈ ಕಾನ್ಸುಲೇಟ್ ಈ ಎಲ್ಲ ಭಾರತೀಯರು ಮರಳಿ ಭಾರತಕ್ಕೆ ಹೋಗಬೇಕೆಂದು ಸೂಚನೆ ನೀಡಿದೆ.

 ಬದಲಾದ ಪರಿಸ್ಥಿತಿಯಲ್ಲಿ ಊಟ ತಿಂಡಿಗೂ ಬಸವಳಿದ ಕೆಲವರಿಗೆ ಅನಿವಾಸಿ ಕನ್ನಡಿಗರು ಆಹಾರ ವ್ಯವಸ್ಥೆ ಮಾಡಿದ್ದಾರೆ. ಆದರೆ ಅವರಿಗೆ ಉಳಿದುಕೊಳ್ಳುವ ಮನೆ ಬಾಡಿಗೆ, ವಾಪಾಸ್ ಕರ್ನಾಟಕಕ್ಕೆ ಹೋಗಲು ವಿಮಾನ ಟಿಕೆಟ್ ವ್ಯವಸ್ಥೆ ಆಗಬೇಕಿದೆ. ದಯವಿಟ್ಟು ಘನ ಸರ್ಕಾರ ಈ ನಿಟ್ಟಿನಲ್ಲಿ ಸಹಾಯ ಮಾಡಬೇಕೆಂದು ಸವಿನಯ ಪ್ರಾರ್ಥನೆ ಮಾಡುತ್ತೇವೆ. ನಮ್ಮ ಕೈಲಾದ ಸಹಾಯವನ್ನು ಇದುವರೆಗೆ ಮಾಡಿದ್ದೇವೆ. ಆದರೆ ಪರಿಸ್ಥಿತಿ ಕೈ ಮೀರುತ್ತಿದೆ.

ಮಾನ್ಯರೆ, ತಮಗೆ ತಿಳಿದಂತೆ ಯುಎಇ ದೇಶ  ಕೊಲ್ಲಿ ರಾಷ್ಟ್ರದಲ್ಲೇ ಎಲ್ಲ ದೇಶಗಳ ಜನ ,ಭಾಷೆ , ಸಂಸ್ಕೃತಿ , ಕಲೆಗೆ ಪ್ರಾಶಸ್ತ್ಯ ನೀಡುವ ದೇಶವಾಗಿದ್ದು ವಿಶೇಷವಾಗಿ ದುಬೈ ನಗರ ಕನ್ನಡಿಗರಿಗೆ ಮತ್ತು ಅವರ ಕನ್ನಡ ಚಟುವಟಿಕೆಗಳಿಗೆ ಮಾನ್ಯತೆ ಕೊಟ್ಟಿದೆ. ನಮ್ಮ ತಂಡ ದುಬೈನಲ್ಲಿ ಪ್ರತಿವರ್ಷ ದುಬೈ ದಸರಾ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ನಡೆಸುತ್ತೇವೆ. ವಿಶ್ವದಾದ್ಯಂತ ಕನ್ನಡಿಗರು ಇದನ್ನು ಪ್ರಶಂಸಿದ್ದಾರೆ. ನಮ್ಮ ತಂಡದ ಮೂಲಕ ಕನ್ನಡ, ಭಾಷೆ ನಡೆ ನುಡಿಯನ್ನು ಅನಿವಾಸಿ ಕನ್ನಡಿಗರಲ್ಲಿ ಚೈತನ್ಯ ಮೂಡಿಸುತಿದ್ದೇವೆ.

ಸನ್ಮಾನ್ಯ ಮಾಜಿ ಪ್ರಧಾನ ಮಂತ್ರಿ .ಶ್ರೀ. ಎಚ್ .ಡಿ. ದೇವೇಗೌಡ  ಬಹರೇನ್ ಕನ್ನಡ ಭವನ ಉದ್ಘಾಟನೆ ಸಂದರ್ಭದಲ್ಲಿ ದುಬೈಗೆ  ಭೇಟಿ ಕೊಟ್ಟಾಗ ಅವರನ್ನು ಸನ್ಮಾನಿಸಿ ಎಲ್ಲ ಕನ್ನಡ ಸಂಘಟನೆಗಳು ದುಬೈನಲ್ಲೂ ಒಂದು ಕನ್ನಡ ಭವನ ನಿರ್ಮಾಣದ ಆಶಯವನ್ನು ವ್ಯಕ್ತಪಡಿಸಿದ್ದೇವೆ.

 ಇಂತಹ ಒಂದು ಕಟ್ಟಡ ಕನ್ನಡ , ಕನ್ನಡ ಸಾಂಸ್ಕೃತಿಕ ಬೆಳವಣಿಗೆ , ಕನ್ನಡ ಗ್ರಂಥಾಲಯಕ್ಕೆ ಅಡಿಪಾಯವಾಗಿದ್ದು ಅನಿರೀಕ್ಷಿತವಾಗಿ ಮೇಲೆ ತಿಳಿಸಿದಂತೆ ಯಾವುದಾದರು ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿಕೊಂಡರೆ ಅವರಿಗೆ ಆಪತ್ಕಾಲದ ಆಶ್ರಯವಾಗುತ್ತದೆ . ಅಲ್ಲದೆ ಕನ್ನಡವನ್ನು ವಿದೇಶದಲ್ಲೂ ಬೆಳೆಯಲು ಅವಕಾಶ ಮಾಡಿಕೊಟ್ಟ ಶ್ರೇಯಸ್ಸು, ಕೀರ್ತಿ ನಿಮ್ಮದಾಗುತ್ತದೆ.

 ಮಾನ್ಯರೆ , ನಿಮಗೆ ತಿಳಿಸಿದಂತೆ ಶೀಘ್ರವೇ ಈ ಕನ್ನಡಿಗರು ತಾಯ್ನಾಡಿಗೆ ಮರಳಲು ವಿಮಾನ ಟಿಕೆಟ್ನ ಸಹಾಯ ಮಾಡಿಕೊಡಲು ಕೋರುತ್ತೇವೆ. ಮತ್ತು ಘನ ಕರ್ನಾಟಕ ಸರ್ಕಾರ ದುಬೈನಲ್ಲಿ ಆದಷ್ಟು ಬೇಗ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡ ತಾಯಿಯ ಮಕ್ಕಳಿಗೆ ವಿದೇಶದಲ್ಲೂ ಧೈರ್ಯದಿಂದ ಬದುಕುವ ಸದವಕಾಶ ಮಾಡಿಕೊಡಲಿ ಎಂದು ಸವಿನಯ ಕಳಕಳಿಯ ಮನವಿ ಮಾಡುತ್ತೇವೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಲು ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಮಮತಾ ರಾಘವೇಂದ್ರ, ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ ,ಮುಖ್ಯ ಕಾರ್ಯರ್ಶಿಗಳಾದ ಸೆಂತಿಲ್ ಬೆಂಗಳೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಮತ್ತು ಸಮಿತಿ ಸಮಿತಿ ಸದಸ್ಯರುಗಳಾದ ಮಮತಾ ಶಾರ್ಜಾ, ಅನಿತಾ ಬೆಂಗಳೂರು,ಪಲ್ಲವಿ ದಾವಣಗೆರೆ, ಡಾ.ಸವಿತಾ ಮೈಸೂರು, ಹಾದಿಯ ಮಂಡ್ಯ, ವಿಷ್ಣು ಮೂರ್ತಿ ಮೈಸೂರು, ಶಂಕರ್ ಬೆಳಗಾವಿ, ಮೊಹಿದ್ದೀನ್ ಹುಬ್ಬಳ್ಳಿ  ಮತ್ತು ಸರ್ವ ಉಪಸಮಿತಿ ಸದಸ್ಯರು ಹಾಜರಿದ್ದರು. 

 
 

Comment here

This site uses Akismet to reduce spam. Learn how your comment data is processed.

Next Post

Hemmeya UAE Kannadigaru Job Fair 2021

Sat Feb 20 , 2021
ಹೆಮ್ಮೆಯ ಯುಎಇ ಕನ್ನಡಿಗರು-ದುಬೈ* ಇದರ ವತಿಯಿಂದ *2ನೇ ವರ್ಷದ ಉದ್ಯೋಗ ಮೇಳ ಮತ್ತು ಇಂಟೆರ್ ವ್ಯೂ ಕಾರ್ಯಗಾರ         Disclaimer: HUK Team does not involve in any financial activities  HUK Team just connecting job seekers and recruiters  HUK Team don’t ask any fee or commission from any candidates