ಹೆಮ್ಮೆಯ ಕನ್ನಡ

ಹೆಮ್ಮೆಯ ಕನ್ನಡ
*ಇರ್ಶಾದ್ ಮೂಡಬಿದ್ರಿ.

ರನ್ನ, ಜನ್ನ, ಪಂಪರು ಹಾಡಿ ಹೊಗಳಿದ ನಾಡು,
ಕನಕ, ಶರೀಫ, ಪುರಂದರ, ಬಸವಣ್ಣರ ಬೀಡು
ಕುವೆಂಪು, ಬೇಂದ್ರೆ, ಅಡಿಗ, ಕಾರಂತ, ಮಾಸ್ತಿ,
ಕನ್ನಡ ಸಾಹಿತ್ಯ ಜಗದ ಅನನ್ಯ ಆಸ್ತಿ.

ಹಸಿರು ಹೊದ್ದು ಮಲಗಿದ ಮಲೆನಾಡು,
ಸುಗಂಧ ಬೀರುವ ಶ್ರೀಗಂಧದ ಕಾಡು,
ಬಯಲು ಸೀಮೆ, ಸಹ್ಯಾದ್ರಿ ಬೆಟ್ಟಗಳ ಸಾಲು,
ಜೋಗದ ಗುಂಡಿಯಲ್ಲಿ ಧುಮುಕುವ ಹಾಲು.

ಶಿಲೆಯಲ್ಲಿ ಅರಳಿದ, ಹಂಪೆ, ಐಹೊಳೆ, ಬೇಲೂರು,
ನಂಬಿಕೆಗೆ ಖ್ಯಾತಿ ಪಡೆದ ಧರ್ಮಸ್ಥಳ, ಕಟೀಲು, ಕೊಲ್ಲೂರು,
ಗಂಗ, ಕದಂಬ, ಹೊಯ್ಸಳ, ಚಾಲುಕ್ಯರ ಶೌರ್ಯ,
ರಾಣ ಅಬ್ಬಕ್ಕ, ಹೊನ್ನಮ್ಮ, ಒನಕೆ ಓಬವ್ವರ ಧೈರ್ಯ.

ಮೀಟಿದರೆ ಸಾಕು ಅಕ್ಷರ ಮಾಲೆಗಳ ವೀಣೆ,
ಇದರ ಸವಿನುಡಿ ಬೇರೆಲ್ಲೂ ಕಾಣೆ,
ಕೃಷ್ಣೆ, ಕಾವೇರಿ, ಶರಾವತಿ, ಕಪಿಲ, ತುಂಗೆ,
ಅದು ಹರಿಯುವ ನೀರಲ್ಲ, ತೀರ್ಥವು ನಮಗೆ.

ಭೇದ ಕಾಣದು ಹಿಂದೂ, ಕ್ರೈಸ್ತ, ಮುಸಲ್ಮಾನ,
ಶಾಂತಿ – ಸಹಬಾಳ್ವೆಯೇ ನಮ್ಮ ಜೀವನ.
ಅಗಲಿ ಇರಲಾರೆ ಈ ನೆಲವ ಬಿಟ್ಟು,
ಮರುಜನ್ಮವಿದ್ದರೆ, ಇಲ್ಲೇ ಆಗಲಿ ಹುಟ್ಟು.

Comment here

This site uses Akismet to reduce spam. Learn how your comment data is processed.

Next Post

ಕನ್ನಡಾಂಬೆಯ ಮುದ್ದಿನ ಮಕ್ಕಳು ನಾವೆಲ್ಲಾ

Fri Dec 18 , 2020
ಕನ್ನಡಾಂಬೆಯ ಮುದ್ದಿನ ಮಕ್ಕಳು ನಾವೆಲ್ಲಾ ಬದುಕುವ ಕನ್ನಡವಾಗಿ ಹೋದಲ್ಲೆಲ್ಲ ಯಾವ ನೆಲದ ಪರಿಮಿತಿ ಇಲ್ಲ ನಮಗೆ ಕನ್ನಡಮ್ಮನ ಮುಡಿಗೆ ಮುಡಿಸುವ ಅಭಿಮಾನದ ಮಲ್ಲಿಗೆ ತನು ಕನ್ನಡ ಮನ ಕನ್ನಡ ನುಡಿ ಕನ್ನಡ ನಮಗೆ, ಮರುಳಾಗದವರಿಲ್ಲ ಕನ್ನಡ ಭಾಷೆಯ ಸೊಗಡಿಗೆ ನಾವು ಸವಿದ ಈ ಸೊಗಸಿನ ಸವಿ ಪಾಕಕೆ ಕಾದಿರಿಸಬೇಕಿದೆ ಮುಂದಿನ ನವ ಪೀಳಿಗೆಗೆ ಕನ್ನಡ ಬಳಸಿ ಬೆಳಸಿ ಉಳಿಸಬೇಕಾಗಿದೆ ಮುಂದಕೆ ಬಂದಿದೆ ನಮ್ಮ ರಾಜ್ಯೋತ್ಸವ ನಮ್ಮೊಂದಿಗೆ ಇಲ್ಲಿಗೆ ಪ್ರತಿದಿನವೂ ಆಚರಿಸೋಣ […]