About us

ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬದ ಕಿರು ಪರಿಚಯ

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎನ್ನುವ ಕುವೆಂಪು ನುಡಿಯಂತೆ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿನ ಮಾತೃಭಾಷೆ, ಕಲೆ, ಸಂಸ್ಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದುವ ಉದ್ದೇಶದಿಂದ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ವಾಟ್ಸಾಪ್ ಗುಂಪು ಪ್ರಾರಂಭವಾಯಿತು. ಶ್ರೀ. ರಫೀಕಲಿ ಕೊಡಗು ಅವರಿಂದ 4ನೆ ಏಪ್ರಿಲ್ 2015 ರಂದು ಪ್ರಾರಂಭವಾದ ಈ ಗುಂಪು ಕನ್ನಡ ಕಂಪನ್ನು ಹರಡುತ್ತಾ ಮುನ್ನುಗ್ಗುತ್ತಿದೆ .
 
ಕನ್ನಡ ನಾಡು ನುಡಿ ಕುರಿತ ವಿಚಾರಗಳು, ಸುದ್ದಿಗಳು ಮತ್ತು ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ ಕನ್ನಡ ಕಾರ್ಯಕ್ರಮಗಳು ಎಲ್ಲೇ ನಡೆದರೂ ಅದನ್ನು ಗುಂಪಿನ ಸದಸ್ಯರಿಗೆ ಮುಟ್ಟಿಸುತ್ತ ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು. ಸದಸ್ಯರು ಸ್ನೇಹಿತರಾದರು, ಸ್ನೇಹಿತರು ಒಗ್ಗೂಡಿ ಕಾರ್ಯಕ್ರಮಗಳ ಆಯೋಜಕರಾದರು , ಆಯೋಜಕರು ಇತರೆ ಕನ್ನಡ ಕೂಟಕ್ಕೆ ಸಂಪರ್ಕ ಸೇತುವೆಯಾದರು, ಸ್ವಯಂ ಪ್ರೇರಿತರಾದರು , ಇತರರಿಗೆ ಕನ್ನಡ ಪ್ರೇರಣೆಯಾದರು.ಯುಎಇ ಯಲ್ಲಿ ಕನ್ನಡ ವೃತ್ತಿಪರರು ಲಾಭ ರಹಿತ (ನಾಟ್ ಫಾರ್ ಪ್ರಾಫಿಟ್ ) ನಡೆಸುತ್ತಿರುವ ಸಾಂಸ್ಕೃತಿಕ ಗುಂಪು ಇದು ಎಂದು ಹೇಳಲು ಬಹಳ ಹೆಮ್ಮೆಯಾಗುತ್ತದೆ .
 
ತಮ್ಮ ತಾಯ್ನಾಡಿಗೆ ಏನಾದರು ಕೊಡುಗೆ ಕೊಡಬೇಕೆಂಬ ಹಂಬಲ ಪ್ರತಿಯೊಬ್ಬ ಅನಿವಾಸಿ ಕನ್ನಡಿಗನಲ್ಲಿ ಮನೆಮಾಡಿರುತ್ತದೆ. ಕನ್ನಡ ಭಾಷೆಯ ಸವಿಯುಂಡ ಪ್ರತಿಯೊಬ್ಬರು ಅದರ ಉಳಿವಿಗೆ, ಬೆಳವಣಿಗೆಗೆ ತಮ್ಮ ಯೋಗದಾನ ಮಾಡಬೇಕೆಂಬ ಹಂಬಲ ಇರುತ್ತದೆ. ರಫೀಕ್ ಅವರು ಈ ನಿಟ್ಟಿನಲ್ಲಿ ಕರೆ ಕೊಟ್ಟಾಗ ಸ್ಪಂದಿಸಿದ ಕನ್ನಡಿಗರಿಂದ ಆಯೋಜಕ ತಂಡ ರಚನೆಯಾಯಿತು. ಸಮಾನ ಮನಸ್ಕರಾದ ಸುದೀಪ್ ದಾವಣಗೆರೆ , ಸೆಂಥಿಲ್ ಬೆಂಗಳೂರು ಮಧು ದಾವಣಗೆರೆ , ಮಮತಾ ದುಬೈ, ಮಮತಾ ಶಾರ್ಜಾ , ಪಲ್ಲವಿ ಬಸವರಾಜ್, ಶಶಿಧರ್, ವೆಂಕಟೇಶ್, ಡಾ.ಸವಿತಾ ಮೋಹನ್, ಅನಿತಾ ರಾಮ್, ಹಾದಿಯ ಮಂಡ್ಯ ಸತೀಶ್ ಮಸೂರ್, ವಿಷ್ಣುಮೂರ್ತಿ ಮೈಸೂರು , ಕೈಜೋಡಿಸಿ ನಿಂತರು. ಕನ್ನಡ ಕಾರ್ಯಕ್ರಮಗಳನ್ನು ನಡೆಸುವ ಪರಿಕಲ್ಪನೆಗೆ ಮೊದಲ ಹೆಜ್ಜೆ ಇಟ್ಟರು.
 
ಹಬ್ಬ ಮತ್ತು ಕ್ರೀಡೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಕಾರ್ಯಕ್ರಮದ ಹಿನ್ನೆಲೆಯಲ್ಲೇ ದುಬೈ ದಸರಾ ಕ್ರೀಡೋತ್ಸವ ಏರ್ಪಡಿಸಲಾಯಿತು. ಸುಮಾರು 700 ಹೆಚ್ಚು ಕನ್ನಡಿಗರು ಭಾಗವಹಿಸಿ ಸುಮಾರು 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಸಿ ಸ್ಪರ್ಧಾ ಮನೋಭಾವ ಮೆರೆದು ಸಂತಸ ಪಟ್ಟರು. ತಾಯ್ನಾಡಿನ ದಸರಾ ಸಂಭ್ರಮವನ್ನು ನೆನೆದು ಅದರ ಹುರುಪನ್ನು ಹಂಚಿಕೊಂಡರು; ಮಕ್ಕಳಿಂದ ಹಿಡಿದು ವಯಸ್ಕರವರಗೆ ವಿವಿಧ ಆಟೋಟ ಸ್ಪರ್ಧೆಗಳು , ರಂಗೋಲಿ ಸ್ಪರ್ಧೆಗಳು ವಿಶೇಷ ಮೆರುಗನ್ನು ನೀಡಿದವು. ಮೊದಲನೇ ಕಾರ್ಯಕ್ರಮವು ಭರ್ಜರಿ ಯಶಸ್ವಿಯಾಗಿ ಕನ್ನಡ ಮನಸುಗಳನ್ನು ಒಂದೆಡೆ ಸೇರಿಸಿದವು.
 
ಹಿಸ್ ಹೈನೆಸ್ಸ್ ಶೇಖ್ ಹಂದಾನ್ ದುಬೈ ರಾಜಕುಮಾರ ಆಯೋಜಿಸಿದ ದುಬೈ ಫಿಟ್ನೆಸ್ ಚಾಲೆಂಜ್ ಅರೋಗ್ಯ ತಿಂಗಳನ್ನು ಪ್ರೋತ್ಸಾಹಿಸಲು ಹೆಮ್ಮೆಯ ಯುಎಇ ಕನ್ನಡಿಗರು ‘ಫನ್ ವಾಕ್ ಕಾರ್ಯಕ್ರಮ ಹಮ್ಮಿಕೊಂಡೆವು. ದುಬೈನ ಝಬೀಲ್ ಪಾರ್ಕಿನಲ್ಲಿ ಎಲ್ಲರೂ ಸೇರಿ 5 ಕಿಲೋಮೀಟರ್ ನಡಿಗೆಯಲ್ಲಿ 150 ಮಂದಿ ಸಂತಸದಿಂದ ಮುಂಜಾನೆ 7 ಘಂಟೆಗೆ ಸೇರಿ ಭಾಗವಹಿಸಿ ಅರೋಗ್ಯ ಮತ್ತು ವ್ಯಾಯಾಮ ಪ್ರಾಮುಖ್ಯತೆಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಎಲ್ಲ ವಯೋಮಾನದವರು ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
 
ಈ ಕಾರ್ಯಕ್ರಮದಿಂದ ಸ್ಪೂರ್ತಿಗೊಂಡ ತಂಡ ಕನ್ನಡ ಮಕ್ಕಳಿಗಾಗಿ ಗಣರಾಜ್ಯೋತ್ಸವ, ಸಂಕ್ರಾಂತಿ, ಕ್ರಿಸ್ಮಸ್ ‘ ಕನ್ನಡ ಮಕ್ಕಳ ಪ್ರತಿಭಾ ಸ್ಪರ್ಧೆ ‘ ಏರ್ಪಡಿಸಿತು.. ಇರಾನಿ ಕ್ಲಬ್ ಆಡಿಟೋರಿಯಂನಲ್ಲಿ ನಡೆದ ಈ ಸುಂದರ ಕಾರ್ಯಕರ್ಮದಲ್ಲಿ ಕನ್ನಡದ ನೂರಕ್ಕೂ ಹೆಚ್ಚು ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಿ ಪ್ರೇಕ್ಷಕರ ಮನಗೆದ್ದರು, ಬಹುಮಾನ ಗಳಿಸಿ ಹೊಸ ಆತ್ಮವಿಶ್ವಾಸದೊಂದಿಗೆ ಕುಣಿದು ಕುಪ್ಪಳಿಸಿದರು.
 
ಕನ್ನಡಿಗರಿಂದ ಕನ್ನಡಿಗರಲ್ಲೇ ವ್ಯವಹಾರ ಎಂಬ ಶೀರ್ಷಿಕೆಯೊಂದಿಗೆ ಯುಎಇ ಕನ್ನಡಿಗಸ್ ಬಿಸಿನೆಸ್ ಫೋರಮ್ ಗುಂಪು ಪ್ರಾರಂಭಿಸಲಾಯಿತು. ಈ ದೇಶದಲ್ಲಿರುವ ಎಲ್ಲ ಕನ್ನಡ ಉದ್ಯಮಿಗಳು ಪರಸ್ಪರ ವ್ಯವಹಾರ ನಡೆಸಿದರೆ ಅದು ವೇಗವಾಗಿಯೂ, ಕನ್ನಡಿಗರಿಗೆ ಅನುಕೂಲಕರ, ಲಾಭದಾಯ್ಕವಾಗಿಯೂ ಪರಿಣಮಿಸುತದೆ, ಈ ನಿಟ್ಟಿನಲ್ಲಿ ಅದು ದಿನದಿಂದ ದಿನಕ್ಕೆ ಶಕ್ತಿಯುತವಾಗಿ ಬೆಳೆಯುತ್ತಲಿದೆ. ಕನ್ನಡ ಉದ್ಯಮಿಗಳ ಸರಕು ಮತ್ತು ಸೇವೆ ಪರಸ್ಪರ ವ್ಯವಹಾರ ವೃದ್ಧಿಸುತ್ತಿದೆ. ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿದ್ಧಾರೆ.
 

 

 
ಈ ದೇಶಕ್ಕೆ ಕೆಲಸ ಹುಡುಕಿ ಬರುವ ಕನ್ನಡಿಗ ಉದ್ಯೋಗಾರ್ಥಿಗಳಿಗೆ ‘ಜಾಬ್ ಸೀಕರ್ಸ್’ ಗ್ರೂಪ್ ಸಹ ತೆರೆಯಲಾಗಿದೆ. ಪ್ರಸ್ತುತ ಇಲ್ಲೇ ಉದ್ಯೋಗದಲ್ಲಿರುವ , ಬದಲಾವಣೆ ಬಯಸುತ್ತಿರುವ ಕನ್ನಡಿಗರಿಗೆ ವೇದಿಕೆ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಇತ್ತೇಚೆಗೆ ಜಾಬ್ ಇಂಟರ್ವ್ಯೂ ಟಿಪ್ಸ್ ಮತ್ತು ಜಾಬ್ ಫೇರ್ ಸೆಶನ್ ನಡೆಸಲಾಯಿತು. ಸುಮಾರು 100 ಕ್ಕೂ ಮೀರಿ ಕೆಲಸ ಹುಡುಕುತ್ತಿರುವ ಕನ್ನಡಿಗರು ಇದರಲ್ಲಿ ಪಾಲ್ಗೊಂಡು ರಿಕ್ಯೂರಿಟರ್ಸ್ಗಳನ್ನ ಭೇಟಿ ಮಾಡಿ ಮಾಹಿತಿ ಪಡೆದರು . ಈ ಶಿಬಿರದ ನಂತರ ಇದುವರೆಗೆ ಸುಮಾರು 45 ಕನ್ನಡಿಗರಿಗೆ ಉದ್ಯೋಗ ದೊರಕಿದೆ ಮತ್ತು ಉದ್ಯೋಗ ಮಾಹಿತಿ ಕನ್ನಡಿಗರಲ್ಲಿ ಪಾದರಸದಂತೆ ವೇಗವಾಗಿ ಹರಿಯುತ್ತಿದೆ.
 
ಸಾಮಾಜಿಕ ಕಳಕಳಿಯಿರುವ ಈ ಗುಂಪು ಕನ್ನಡಿಗರಿಗೆ ಸಂಕಷ್ಟ ಬಂದಾಗ ಸ್ಪಂದಿಸುತ್ಹಿದೆ. ದುಬೈನಲ್ಲಿ ಅಪಘಾತದಲ್ಲಿ ಮರಣ ಹೊಂದಿದ ಶ್ರೀ.ಜೋಸೆಫ್ ಡಿಸೋಜಾ ಮತ್ತು ಅಕಾಲ ಮೃತ್ಯ ಹೊಂದಿದ ಯುವಕ ಶ್ರೀ.ಮಂಜುನಾಥ್ ಕುಟುಂಬಕ್ಕೆ ಸದಸ್ಯರಿಂದ ಸಹಾಯ ಬೇಡಿ ಅವರ ಕುಟುಂಬಕ್ಕೆ ಧನಸಹಾಯ, ಶಾರ್ಜಾದ ಆಸ್ಪತ್ರೆಯಲ್ಲಿ ತೀವ್ರ ಖಾಯಿಲೆಯಿಂದ ಬಳಲುತ್ತಿದ್ದ ನಾಗರಾಜ್ ಅವರಿಗೆ ಸಹಾಯ, ಕೊಡಗು ಉತ್ತರ ಕರ್ನಾಟಕ ಪ್ರವಾಹ ಪರಿಹಾರ ನಿದಿಗೆ ದೇಣಿಗೆ ಸಂಗ್ರಹಿಸಿದ್ದು ಅದನ್ನು ಸಂತ್ರಸ್ತರಿಗೆ ಶೀಘ್ರದಲ್ಲೇ ತಲುಪಿಸಲಾಗುವುದು . ಕನ್ನಡದ ಯುವತಿಯೋರ್ವಳು ವೀಸಾ ವಂಚನೆಗೊಳಗಾಗಿ ಸಮಾಜಘಾತುಕರ ಕೈಸೆರೆಯಾಗುವ ವಿಷಯ ತಿಳಿದ ಸದಸ್ಯರು ಕೂಡಲೇ ಅವಳ ನೆರವಿಗೆ ಧಾವಿಸಿ ಸುರಕ್ಷಿತವಾಗಿ ಕಾಪಾಡಿ ಆಕೆಯನ್ನು ಸ್ವದೇಶಕ್ಕೆ ಮರಳುವ ವ್ಯವಸ್ಥೆ ಮಾಡಿಕೊಟ್ಟಿತು . ಇಂತಹ ಅನೇಕ ದಿನನಿತ್ಯ ಉದಾಹರಣೆಗಳು ಈ ಗುಂಪಿನ ವೈಶಿಷ್ಟ್ಯ .
 
ಅಬುಧಾಬಿಯಲ್ಲಿ ನಡೆದ ವಿಶ್ವ ವಿಶೇಷ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತದ ಕ್ರೀಡಾಪಟುಗಳು 364 ಪದಕ ಗಳಿಸಿದರು, 85 ಚಿನ್ನ, 154 ಬೆಳ್ಳಿ, 129 ಕಂಚಿನ ಪದಕಗಳಿಸಿದ ಕರ್ನಾಟಕದ ಆಟಗಾರರು ಮತ್ತು ತಂಡದ ಸಹ ತರಬೇತುದಾರರು ಕನ್ನಡತಿ ಶ್ರೀಮತಿ.ಆರತಿ ಅಚುದ ಕಾರ್ಯ ನಿರ್ವಹಿಸಿದ್ದರು. ಹೆಮ್ಮೆಯ ಯುಎಇ ಕನ್ನಡಿಗರ ತಂಡ ಈ ಹೆಮ್ಮೆಯ ಕನ್ನಡತಿಯನ್ನು ಮತ್ತು ಭಾಗವಹಿಸಿದ ಮಕ್ಕಳನ್ನು ಭೇಟಿ ಮಾಡಿ ಸನ್ಮಾನಿಸಿ, ಗೌರವ ಸಲ್ಲಿಸಿತು.
 
ರಮಾದಾನ್ ತಿಂಗಳ ಶುಭ ಸಂದರ್ಭದಲ್ಲಿ ಸರ್ವಧರ್ಮ ಕೂಟ ಮತ್ತು ಇಫ್ತಾರ್ ಭೋಜನ ಸಂಜೆ ನಡೆಯಿತು . ಎಲ್ಲ ಧರ್ಮದ ಕನ್ನಡಿಗರು ಇದರಲ್ಲಿ ಪಾಲ್ಗೊಂಡು ಸಹಿಷ್ಣುತಾ ವರ್ಷ 2019 ರ ಮೇಲ್ಮೆಯನ್ನು ಮೆರೆದರು . ಎಲ್ಲ ಧರ್ಮಗಳ ಸಾರ ಒಂದೇ ಎಂಬ ಸಂದೇಶವನ್ನು ಈ ಮೂಲಕ ಪ್ರೀತಿಯಿಂದ ಹಂಚಿಕೊಂಡರು.
 
ಹೆಮ್ಮೆಯ ಯುಎಇ ಕನ್ನಡಿಗರಿಂದ ಸ್ಪೂರ್ತಿಗೊಂಡು ಹೆಮ್ಮೆಯ ಯುಎಇ ಕನ್ನಡಿಗರು – ರಾಕ್ ಪ್ರಾಂಭವಾಯಿತ್ತೆಂದು ಹೇಳಲು ಅತ್ಯಂತ ಹರ್ಷವಾಗುತ್ತಿದೆ. ರಾಸ್ ಅಲ್ ಖೈಮಾ ಕನ್ನಡಿಗರು ‘ರಾಕ್ ಕನ್ನಡ ಸಂಘ’ ಆರಂಭಿಸಿದ್ದು , ಕನ್ನಡದ ಮತ್ತೊಂದು ಉಜ್ವಲ ದೀಪ ಹತ್ತಿದೆ .ಕನ್ನಡ ಗೃಹ ಪಾಠಶಾಲೆ ಮೂಲಕ ಕನ್ನಡ ಮಕ್ಕಳ ಕನ್ನಡ ಭಾಷಾ ವಿದ್ಯೆ,ಪ್ರೇಮ, ವೇಗವಾಗಿ ಬೆಳೆಯುತ್ತಿದೆ, ಕನ್ನಡಿಗರ ಪರಸ್ಪರ ಪರಿಚಯ ,ಸಂಪರ್ಕ ಹೊಸ ಚೈತನ್ಯ ಮತ್ತು ಶಕ್ತಿ ತರುತ್ತಿದೆ. ಹಾಗೇ ಕನ್ನಡ ಮಣ್ಣಿನಿಂದ ಅರಬರ ಈ ನಾಡಿಗೆ ಬಂದು ಸೇವೆ ಸಲ್ಲಿಸುತ್ತಿರುವ ಕನ್ನಡ ವೈದ್ಯರುಗಳ ಒಂದು ಒಕ್ಕೂಟವನ್ನು ನಾವು ರಚಿಸಿದ್ದು ಎಲ್ಲಾ ಕನ್ನಡಕ್ಕಾಗಿ ಮಾಡುವ ನಮ್ಮ ಅಳಿಲು ಸೇವೆಗೆ ನಿಮ್ಮೆಲ್ಲರ ಸಹಾಯ ಸಹಕಾರ ಸದಾ ಹೀಗೆ ಇರಲಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
 
ಹೆಮ್ಮೆಯ ಯುಎಇ ಕನ್ನಡಿಗ ಗುಂಪು ೭ ಎಮಿರೇಟ್ನ್ಲಲಿ ನಡೆಯುವ ಯಾವುದೇ ಕನ್ನಡ ಕಾರ್ಯಕ್ರಮಗಳನ್ನು ಗುಂಪಿನಲ್ಲಿ ಹಾಕಿ ಸದಸ್ಯರನ್ನು ಭಾಗವಹಿಸಲು ಪ್ರೋತ್ಸಾಹಿಸುತ್ತದೆ . ಕನ್ನಡಿಗ ಏಳ್ಗೆ, ಕನ್ನಡಿಗ ಭಾಷೆಯ ಬೆಳವಣಿಗೆ, ಕನ್ನಡ ಸಂಸ್ಕೃತಿಯ ಉಳಿವೆ ಇದರ ಮೂಲ ಉದ್ದೇಶ .
 

ಕೋವಿಡ್ ಕಾಲದಲ್ಲಿ ಆಪತ್ ಭಾಂಧವರಾದ ಹೆಮ್ಮೆಯ ದುಬೈ ಕನ್ನಡ ಸಂಘ

ಕೋವಿಡ್ ಸಮಯದಲ್ಲಿ ದುಬೈ ಮಣ್ಣಿನಲ್ಲಿ ಹೆಮ್ಮೆಯ ಕನ್ನಡದ ದ್ವನಿ* ದಾನಿಗಳ ಸಹಾಯದಿಂದ 16 ಲಕ್ಷ ರೂಗಿಂತ ಹೆಚ್ಚು ಸಹಾಯ ತಲುಪಿಸಿದ ದುಬೈ ಹೆಮ್ಮೆಯ ಕನ್ನಡ ಸಂಘಟನೆ

ಕೊರೋನಾ ಮಹಾಮಾರಿ ಪ್ರಾರಂಭವಾಗಿ ಲಕ್ಷಾಂತರ ಜನರು ವಾಸಿಸುವ ದುಬೈಯ ಹೃದಯ ಭಾಗವಾದ ದೇರಾ ದುಬೈಯು ಕೋರೋನ ವೈರಸ್ ಹಾಟ್ ಸ್ಪಾಟ್ ಸ್ಥಳವಾಗಿ ಮಾರ್ಪಟ್ಟಾಗ ದುಬೈ ಸರ್ಕಾರ ದೇರಾ ದುಬೈ ಪ್ರಾಂತ್ಯವನ್ನು ಸಂಪೂರ್ಣವಾಗಿ ಎರಡು ತಿಂಗಳುಗಳ ಕಾಲ ಲಾಕ್ಡೌನ್ ಮೇಲೆ ಸೀಲ್ಡೌನ್ ಮಾಡಿದರು ( ಈ ಪ್ರದೇಶದಿಂದ ಯಾರು ಸಹ ಹೊರ ಹೋಗುವಾಗಿಲ್ಲ ಮತ್ತು ಇಲ್ಲಿಗೆ ಯಾರು ಸಹ ಒಳ ಬರುವಾಗಿಲ್ಲ ಎಂಬ ನಿಷೇದಾಜ್ಞೆ) ,
ಈ ಸೀಲ್ಡೌನ್ ಸಮಯದಲ್ಲಿ ದುಬೈ ಪೊಲೀಸರು ಮತ್ತು ದುಬೈ ಅರೋಗ್ಯ ಸಂಸ್ಥೆಯೊಂದಿಗೆ ಸೇರಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಕರ್ನಾಟಕದಿಂದ ದುಬೈ ಹೆಮ್ಮೆಯ ಕನ್ನಡಿಗರು ಸಂಘಕ್ಕೆ ಮಾತ್ರ ಅವಕಾಶ ಸಿಕ್ಕಿತ್ತು, ಸೀಲ್ಡೌನ್ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಜನರಿಗೆ ಆಹಾರ ಪೂರೈಕೆ, ಅಗತ್ಯ ಔಷದಿ ಪೂರೈಕೆ ಮತ್ತು ಸಾವಿರಾರು ಕೋವಿಡ್ ರೋಗಿಗಳನ್ನು( ನೂರಾರು ಕನ್ನಡಿಗ ರೋಗಿಗಳನ್ನು ಸಹ ) ಐಸೋಲೇಷನ್ ವಾರ್ಡುಗಳಿಗೆ ಮತ್ತು ಆಸ್ಪತ್ರೆಗೆ ವರ್ಗಾವಣೆ ಮಾಡುವ ಕೆಲಸವನ್ನು ಸಂಘಟನೆ ದುಬೈ ಪೊಲೀಸರು ಮತ್ತು ದುಬೈ ಅರೋಗ್ಯ ಸಂಸ್ಥೆಯ ಜೊತೆ ಸೇರಿ ರಫೀಕಲಿ ಕೊಡಗು ಅವರ ಮುಂದಾಳತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಇಲ್ಲಿನ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾದರು .

ದುಬೈ ಹೆಮ್ಮೆಯ ಕನ್ನಡ ಸಂಘಟನೆ ಕೋವಿಡ್ ಲೊಕ್ಡೌನ್ ಕಾರಣ ಕೆಲಸ ಕಳೆದುಕೊಂಡ ನೂರಾರು ಕನ್ನಡಿಗರಿಗೆ, ವಿಸಿಟ್ ವೀಸಾದಲ್ಲಿ ಕೆಲಸ ಹುಡುಕಲು ಬಂದ ನೂರಾರು ಕನ್ನಡಿಗರಿಗೆ ಮತ್ತು ಸಂಕಷ್ಟದಲ್ಲಿದ್ದ ಕನ್ನಡ ಕುಟುಂಬಗಳಿಗೆ ಉದ್ಯಮಿ ಮೊಹಮ್ಮದ್ ಮುಸ್ತಫಾ ಕನ್ನಡಿಗ ಮತ್ತು ಹಲವು ಕನ್ನಡಿಗ ದಾನಿಗಳ ಸಹಾಯದಿಂದ ಒಂದು ತಿಂಗಳಿಗಾಗುವಷ್ಟು ಆಹಾರ ಪದಾರ್ಥ ತಲುಪಿಸಿದರು ಮತ್ತು ಸಂಕಷ್ಟದಲ್ಲಿದ್ದವರಿಗೆ ವಾಸಸ್ಥಳದ ವ್ಯವಸ್ಥೆ ಮಾಡಿಕೊಟ್ಟರು, ಹಾಗೂ ತಾಯಿನಾಡಿಗೆ ಮರಳಲು ವಿಮಾನ ಟಿಕೆಟ್ ತೆಗೆಯಲು ಹಣ ಇಲ್ಲದ ಹಲವರಿಗೆ ಉಚಿತವಾಗಿ ಟಿಕೆಟ್ ನೀಡಿದರು, ದಾನಿಗಳ ಸಹಾಯದಿಂದ ಸುಮಾರು 16 ಲಕ್ಷ ರೂಗಿಂತ ಹೆಚ್ಚು ಸಹಾಯವನ್ನು ವಿವಿಧ ರೀತಿಯಲ್ಲಿ ಈ ಕೊರೋನಾ ಮಹಾಮಾರಿ ಸಂದಿಗ್ದ ಸಮಯದಲ್ಲಿ ಹೆಮ್ಮೆಯ ಕನ್ನಡಿಗರು ತಂಡ ಮಾಡಿತ್ತು.

ಅದು ಅಲ್ಲದೆ ಯುಎಇಯಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ಡಾಕ್ಟರ್ಸ್ ಜೊತೆ ಸೇರಿ ಹೆಮ್ಮೆಯ ಕನ್ನಡಿಗರು ತಂಡದ ಡಾಕ್ಟರ್ ಸವಿತಾ ಮೋಹನ್ ಮೈಸೂರು ಅವರ ಮುಂದಾಳತ್ವದಲ್ಲಿ ಫೀಸ್ ಭರಿಸಲು ಸಾಧ್ಯವಿಲ್ಲದ ಹಲವು ಕನ್ನಡಿಗ ರೋಗಿಗಳಿಗೆ ಉಚಿತ ಮೆಡಿಕಲ್ ಚಿಕಿತ್ಸೆ ಮತ್ತು ಅರೋಗ್ಯ ಕನ್ಸಲ್ಟೇಷನ್ ಆನ್ಲೈನ್ ಮೂಲಕ ನೀಡಿ ಸಹಾಯ ಮಾಡಿದರು.

ಕೋವಿಡ್-19 ಮಾರಕ ಖಾಯಿಲೆಯಿಂದ ಇಡೀ ಪ್ರಪಂಚವೇ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಲಾಕ್ ಡೌನ್ ಸಡಿಲಗೊಂಡಾಗ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗರ್ಭಿಣಿಯರು, ಮೆಡಿಕಲ್ ಎಮರ್ಜಿನ್ಸಿ,ವಿದ್ಯಾರ್ಥಿಗಳು, ಮಕ್ಕಳು, ಹಿರಿಯರು,ಕೆಲಸ ಕಳೆದುಕೊಂಡವರು, ಸಂದರ್ಶನ ವೀಸಾದಲ್ಲಿದ್ದವರು ಸೇರಿ ಸಂಕಷ್ಟದಲ್ಲಿದ್ದ ಹಲವು ಕನ್ನಡಿಗರನ್ನು ಚಾರ್ಟೆಡ್ ವಿಮಾನ ಮತ್ತು ವಂದೇ ಭಾರತ್ ವಿಮಾನಗಳ ಮೂಲಕ ತಾಯಿನಾಡಿಗೆ ತಲುಪಿಸುವ ಕಾರ್ಯದಲ್ಲಿ ಹೆಮ್ಮೆಯ ಕನ್ನಡಿಗರು ತಂಡ ಸಕ್ರೀಯವಾಗಿ ಕಾರ್ಯ ನಿರ್ವಹಿಸಿತ್ತು.

ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಆಹಾರ ಸಾಮಗ್ರಿ, ಔಷದಿ ಮತ್ತು ಇನ್ನಿತರ ಸಹಾಯ ತಲುಪಿಸಲು ತಮ್ಮ ತಮ್ಮ ಸ್ವಂತ ವಾಹನಗಳನ್ನು ಬಳಸಿ ತಂಡದ ಜೊತೆ ನವಾಜ್ ಕುಂದಾಪುರ, ಹರೀಶ್ ಕೊಡಗು, ಕ್ಲೀವನ್ ಉಡುಪಿ, ಅಬ್ದುಲ್ ಹಾದಿ ಭಟ್ಕಳ, ಸುಹೈಲ್ ಮಂಗಳೂರು, ನೌಫಲ್ ದಕ್ಷಿಣ ಕನ್ನಡ,ನಿಜಾರ್ ಕಾಸರಗೋಡು ಕನ್ನಡಿಗ, ಫಯಾಜ್ ಕುಂದಾಪುರ, ಅಬ್ರಾರ್ ಶಿವಮೊಗ್ಗ, ಹಾದಿಯ ಮಂಡ್ಯ, ಮಮತಾ ಶಾರ್ಜಾ, ಸೆಂತಿಲ್ ಬೆಂಗಳೂರು, ಮೊಯಿನುದ್ದೀನ್ ಹುಬ್ಬಳ್ಳಿ, ಸಯ್ಯದ್ ಶಿವಮೊಗ್ಗ,ವಿನೋದ್ ಡಿಸೋಜ ಮಂಗಳೂರು, ರಫೀಕಲಿ ಕೊಡಗು ಮುಂತಾದವರು ಸಂಯುಕ್ತ ಅರಬ್ ಸಂಸ್ಥಾನದ ಏಳು ಎಮಿರೇಟುಗಳ ( ಅಬುಧಾಬಿ, ದುಬೈ, ಅಜ್ಮಾನ್, ಫುಜೈರಾ, ರಾಸ್ ಅಲ್ ಖೈಮಾ, ಶಾರ್ಜಾ ಮತ್ತು ಉಮ್ ಅಲ್ ಕ್ವೈನ್ ) ವಿವಿಧ ಕಡೆಗಳಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಆಹಾರ ಔಷದಿ ತಲುಪಿಸಲು ಬಹಳ ಶ್ರಮ ವಹಿಸಿದರು.

ಹೆಮ್ಮೆಯ ಕನ್ನಡಿಗರು ತಂಡದ ಬಗ್ಗೆ ಸಂಕ್ಷಿಪ್ತ ವರದಿ
ಕನ್ನಡ ಮಣ್ಣಿಗೆ ಅನ್ಯಾಯವಾಗುವಾಗ ದೂರದ ವಿದೇಶದಿಂದಲೇ ತಾಯ್ನಾಡಿಗಾಗಿ ದ್ವನಿ ಎತ್ತುವ ಈ ತಂಡವು ದಸರಾ ಕ್ರೀಡಾಕೂಟ, ಕನ್ನಡ ರಾಜ್ಯೋತ್ಸವ , ಸ್ವಾತಂತ್ರ್ಯ ದಿನಾಚರಣೆ ಮುಂತಾದ ಕಾರ್ಯಕ್ರಮಗಳನ್ನು ಮತ್ತು ಸರ್ವ ಧರ್ಮ ಇಫ್ತಾರ್ ಕೂಟ, ಸಂಕ್ರಾಂತಿ, ಕ್ರಿಸ್ಮಸ್ ಮುಂತಾದ ಧಾರ್ಮಿಕ ಹಬ್ಬಗಳನ್ನು ವಿದೇಶದಿಂದಲೇ ಸಂಭ್ರಮದೊಂದಿಗೆ ಎಲ್ಲರೂ ಜೊತೆ ಸೇರಿ ಆಚರಿಸಿತ್ತಾರೆ.ಇದರೊಂದಿಗೆ ಕನ್ನಡಿಗರ ಯಶಸ್ವಿಗೆ ಶ್ರಮಿಸಿದ ಕರ್ನಾಟಕದ ಹೆಸರನ್ನು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ಬೆಳಗಿಸಿದ ಕ್ರಿಡಾಪಟುಗಳು,ದೀರ ಯೋಧರು, ಕವಿಗಳನ್ನು ದುಬೈಗೆ ಕರೆಸಿಕೊಂಡು ಅವರಿಗೆ ಸನ್ಮಾನ ಸಮಾರಂಭಗಳನ್ನು ಎರ್ಪಡಿಸುತ್ತಾರೆ.

ಕನ್ನಡ ನಾಡಿನಿಂದ ಕೆಲಸ ಹುಡುಕಿಕೊಂಡು ಬಂದ ಜನರಿಗೆ ಉದ್ಯೋಗದ ಬಗ್ಗೆ ಮಾಹಿತಿ ಮತ್ತು ಹಲವರಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಕೊಟ್ಟಿದ್ದಲ್ಲದೆ ವರ್ಷಕ್ಕೆ ಒಂದು ಬಾರಿ ಜಾಬ್ ಫೇರ್ ಮಾಡಿ ಇಲ್ಲಿ ನೆಲಸಿರುವ ಬಿಸ್ನೆಸ್ ಕನ್ನಡಿಗರನ್ನು ಮತ್ತು ಇತರ ಕನ್ನಡೇತರ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗ ಎಚ್ ಆರ್ ಗಳನ್ನು ಕರೆಸಿ ಅವರ ಸಂಸ್ಥೆಗಳಿಗೆ ನೇಮಕಾತಿ ಮಾಡಿಕೊಳ್ಳುದು ಹಾಗೆ ಯುಎಇಯಲ್ಲಿರುವ ಬಿಸ್ನೆಸ್ ಕನ್ನಡಿಗರನ್ನು ಒಂದುಗೂಡಿಸಿ ಯುಎಇ ಕನ್ನಡಿಗಾಸ್ ಬಿಸ್ನೆಸ್ ಫಾರಂ ಮೂಲಕ ಕನ್ನಡಿಗರ ವ್ಯಾಪಾರ ವ್ಯವಹಾರಗಳಿಗೆ ಸಹಾಯ ಮಾಡುದು ಮುಂತಾದ ಯೋಜನೆಗಳನ್ನು ಮಾಡುತ್ತಾರೆ. ಅದೇ ರೀತಿ ಊರಿನಲ್ಲಿ ಪ್ರಾಕೃತಿಕ ವಿಕೋಪದಂತ ಸಂಕಷ್ಟಗಳು ಬಂದಾಗ ಸಹಾಯ ಹಸ್ತ, ಬಡವರಿಗೆ ಮತ್ತು ರೋಗಿಗಳಿಗೆ ಆರ್ಥಿಕ ಸಹಾಯ ಹಾಗೂ ರಕ್ತದಾನ ಶಿಬಿರದಂತ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದ್ದಾರೆ, ವರ್ಷದಲ್ಲಿ ಒಂದು ಬಾರಿ ಕನ್ನಡಿಗರನ್ನೆಲ್ಲ ಸೇರಿಸಿ ದೂರದ ಪ್ರದೇಶಗಳಿಗೆ ಬಸ್ ಪ್ರವಾಸವನ್ನು ಆಯೋಜಿಸುತ್ತಾರೆ.

ಹೆಮ್ಮೆಯ ಕನ್ನಡಿಗರು ತಂಡ : ಸುದೀಪ್ ದಾವಣಗೆರೆ ( ಅಧ್ಯಕ್ಷರು ) , ಮಮತಾ ರಾಘವೇಂದ್ರ ಮೈಸೂರು ( ಉಪಾಧ್ಯಕ್ಷರು), ಸೆಂತಿಲ್ ಬೆಂಗಳೂರು ( ಮುಖ್ಯ ಕಾರ್ಯದರ್ಶಿ), ರಫೀಕಲಿ ಕೊಡಗು, ಮಮತಾ ಶಾರ್ಜಾ ಬೆಂಗಳೂರು, ಪಲ್ಲವಿ ಬಸವರಾಜ್ ಧಾರವಾಡ, ಡಾ. ಸವಿತಾ ಮೋಹನ್ ಮೈಸೂರು, ಅನಿತಾ ರಾಮ್ ಬೆಂಗಳೂರು, ವಿಷ್ಣುಮೂರ್ತಿ ಮೈಸೂರು, ಹಾದಿಯ ಮಂಡ್ಯ, ಶಂಕರ್ ಬೆಳಗಾವಿ, ಮೊಇದೀನ್ ಹುಬ್ಬಳ್ಳಿ, ವಾಗೀಶ್ ಮೈಸೂರು ಹಾಗೂ 5೦ ಸದಸ್ಯರ ಉಪ ತಂಡವನ್ನು ಒಳಗೊಂಡಿದೆ.

video link https://www.youtube.com/watch?v=h1CRoL5oqb4&t=8s